Friday 15 July 2011

ಅತ್ತೆ, ಮಾವ ಮತ್ತು ನಾನು

ಅತ್ತೆ, ಮಾವ ಮತ್ತು ನಾನು
      (ಮೊಗವೀರ, ಮುಂಬೈ-ಸೆಪ್ಟೆಂಬರ್ ೧೯೮೬ ರಲ್ಲಿ ಪ್ರಕಟಿತ)                                              ಬೇಬಿ ಹೆಜಮಾಡಿ

ಕೆಲವೊಮ್ಮೆ ನನಗೆ ಮಾವನ ನೆನಪಾಗುವುದುಂಟು. ಅವರ ನೆನಪೆಂದರೆ, ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಒಂದು ಮಸುಕು ಆಕೃತಿ ಮಾತ್ರ. ನಾನೂ ಅವರನ್ನು ತುಂಬಾ ಹಚ್ಚಿಕೊಂಡಿದ್ದೆನಂತೆ. ಯಾವಾಗಲೂ ಅವರೊಡನೆ ತಿರುಗಾಡುತ್ತಿದ್ದೆನಂತೆ. ರಾತ್ರಿ ಮಾವ ಅತ್ತೆಯರ ಮಧ್ಯದಲ್ಲೇ ಮಲಗುತ್ತಿದ್ದೆನಂತೆ. ಅಷ್ಟೇ ಯಾಕೆ ಮದುವೆಯ ದಿನವೂ ನಾನು ಅವರ ಇಬ್ಬರ ನಡುವೆ ಕುಳಿತ್ತೆದ್ದೆನಂತೆ. ಅಮ್ಮ ಆಗಾಗ ಹೇಳುವಂತೆ ನನ್ನನ್ನು ಅವರು ಹನಿಮೂನಿಗೆ ಮಾತ್ರ ಕರೆದುಕೊಂಡು ಹೋಗಲಿಲ್ಲವಂತೆ.
          ಮಾವನಂತೆ ಅತ್ತೆಯೂ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಪ್ರೀತಿ ಎಂಬುದು ವನ್ ವೇ ಟ್ರಾಫಿಕ್ ಅಲ್ಲ. ನಾನೂ ಅಷ್ಟೆ. ಅತ್ತೆಯನ್ನು ಈಗಲೂ ಪ್ರೀತಿಸುತ್ತೇನೆ.. ಮಾವ ಸತ್ತು ಹದಿನಾಲ್ಕು ವರ್ಷಗಳ ಮೇಲಾದರೂ, ಮಾವನ ನೆನಪು ಸ್ವಲ್ಪ ಕಡಿಮೆ ಆಗಿರುವದಾದರೂ, ನನ್ನ ಮತ್ತು ಅತ್ತೆಯ ಪ್ರೀತಿ ಕಡಿಮೆ ಆಗಿಲ್ಲ.
          ಈಗ ಅತ್ತೆ ಬೇರೆಯೇ ಇರುವುದಾದರೂ, ನಾನು ಅವರನ್ನು ದಿನದಿನವೂ ಫ಼ೋನಿನಲ್ಲಿ ಸಂಪರ್ಕಿಸುತ್ತೇನೆ. ವಾರಕ್ಕೊಮ್ಮೆಯಾದರೂ ಅವರ ಮನೆಗೆ ಹೋಗುತ್ತೇನೆ. ನನಗೆ ಇವತ್ತು ಸಿಕ್ಕಿರುವ ಯಶಸ್ಸಿನ ಹಿಂದೆ ಇರುವ ಏಕೈಕ್ಯ ವ್ಯಕ್ತಿ ನನ್ನ ಅತ್ತೆ. ಆಕೆಯ ಪ್ರೋತ್ಸಾಹ, ಮಾರ್ಗದರ್ಶನ, ಜೀವನವನ್ನು ಕಾಣುವ ರೀತಿ ಇವು ನನ್ನ ಯಶಸ್ಸಿನ ಹಿಂದಿನ ಗುಟ್ಟು.
          ಅತ್ತೆಯನ್ನು ಭೇಟಿಯಾದ ದಿನ ನಾನು ಮನೆಯಲ್ಲಿ ಏನಾದರೂ ಆಕೆಯ ಬಗ್ಗೆ ’ಶಿಫರಾಸು’ ಮಾತನಾಡಿದರೆ ಪಪ್ಪ ವ್ಯಂಗ್ಯ ನಗು ಬೀರುತ್ತಾರೆ. ಅಮ್ಮ ಮುಖ ಗಂಟಿಕ್ಕುತ್ತಾಳೆ. ದೊಡ್ಡ, "ನಿನ್ನ ಮಾವನನ್ನು ಕೊಂದದ್ದೇ ಆಕೆ" ಅನ್ನುತ್ತಾ ಕಣ್ಣೀರು ಸುರಿಸುತ್ತಾರೆ. ಆ ಸುಕ್ಕುಗಟ್ಟಿದ ಮುದಿ ಮುಖದಲ್ಲಿ ಕಣ್ಣೀರು ಕಂಡಾಗ ನಾನು ಚಡಪಡಿಸುತ್ತೇನೆ. ಯಾಕಾಗಿ ಅತ್ತೆಯ ಬಗ್ಗೆ ಮಾತನಾಡಿದೆ ಅನಿಸುತ್ತದೆ.
          ಅತ್ತೆಯನ್ನು ಮನೆಯಲ್ಲಿ ಹೆಚ್ಚಾಗಿ ದೂರುವುದಿಲ್ಲವಾದರೂ ಆಕೆಯನ್ನು ಹೊಗಳುವುದಿಲ್ಲ. ಅತ್ತೆ ಎಲ್ಲರೊಡನೆ ಉತ್ತಮವಾಗಿ ನಡೆದುಕೊಳ್ಳುತ್ತಿದ್ದರಂತೆ. ಆದರೆ ಮಾವ ಮತ್ತು ಅತ್ತೆಗೆ ಕೂಡಿಬರಲಿಲ್ಲವಂತೆ. ಗಂಡ ಹೆಂಡಿರ ನಡುವೆ ಇರಬೇಕಾದಷ್ಟು ಅನ್ಯೋನ್ಯತೆ ಇರಲಿಲ್ಲವಂತೆ.
          ಮನೆಯಲ್ಲಿ ಮಾವನ ಬಗೆಗೆ ಏನಾದರೂ ಮಾತನಾಡಿದರೆ ಅವರನ್ನು ತುಂಬಾ ಹೊಗಳುತ್ತಾರೆ. ಕೆಲವೊಮ್ಮೆ ಅಮ್ಮ ಮತ್ತು ದೊಡ್ಡ ಮಾತನಾಡುವಾಗ ಮಾವ ಒಬ್ಬ ದೇವತಾ ಪುರುಷ ಅನ್ನುವ ಭಾವನೆ ಬರುತ್ತದೆ. ಸತ್ತ ಮಾವ ಹೇಗಿದ್ದರೂ ಅವರ ಅಕ್ಕ, ಅಮ್ಮನಿಗೆ ಅವರು ದೇವತಾ ಪುರುಷನಾಗಿರುವುದು ಸಹಜ ತಾನೆ.
          ಅನೆಕ ಬಾರಿ ಮಾವನ ಬಗ್ಗೆ ಹೆಚ್ಚು ತಿಳಿಯಬೇಕು ಅನಿಸುತ್ತದೆ. ಅವರ ಹಿಂದಿನ ಫೋಟೋಗಳನ್ನು ಕಂಡಾಗ ಮುಖದಲ್ಲಿ ದೃಡತೆ ಇಲ್ಲದ, ನೋವಿನ ನಗೆ ಬೀರುತ್ತಿರುವ, ಕೃಶಕಾಯ ವ್ಯಕ್ತಿಯನ್ನು ಕಾಣುತ್ತೇನೆ. ಮದುವೆಯ ಮುಂಚಿನ ಫೋಟೋಗಳಲ್ಲೂ ನಾನು ವೇದನೆ ತುಂಬಿದ ನಗು ಬೀರುತ್ತಿರುವ ಮಾವನ ಮುಖ ನೋಡುತ್ತೆನೆ. ಅಂದರೆ ಮದುವೆಯ ಮೊದಲೂ ಮಾವ ಸಂತೋಷದಿಂದಿರಲಿಲ್ಲ. ಯಾವುದೋ ಕೊರಗಿನಿಂದ ಬೇಯುತ್ತಿದ್ದರು. ಆದರೆ ಅತ್ತೆಯ ಫೋಟೋದಲ್ಲಿ ಹಾಗಿಲ್ಲ. ಮದುವೆಯ ಮೊದಲು ಇರುತ್ತಿದ್ದ ಸ್ವಚ್ಚಂದದ ನಗು ಮದುವೆಯ ನಂತರದ ಫೋಟೋದಲ್ಲಿ ಕಾಣುವದಿಲ್ಲ. ಹಾಗಾದರೆ ಮದುವೆಯ ನಂತರ ಏನಾಯಿತು? ಮಾವ ಅತ್ತೆಯರ ನಡುವೆ ಹೊಂದಾಣಿಕೆ ಯಾಕೆ ಬರಲಿಲ್ಲ? ಮದುವೆಯಾದ ಎರಡೇ ವರ್ಷಗಳ ಒಳಗೆ ಮಾವ ಯಾಕೆ ಆತ್ಮಹತ್ಯೆ ಮಾಡಿಕೊಂರು?
          ನಮ್ಮ ಮನೆಯಲ್ಲಿ ದೊಡ್ಡದಾದ ಮಾವನ ತ್ಯೆಲಚಿತ್ರ ಒಂದನ್ನು ತೂಗ ಹಾಕಿದ್ದಾರೆ. ಆದರೆ ಅತ್ತೆಯ ಮನೆಯಲ್ಲಿ ಅದೂ ಇಲ್ಲ. ಅತ್ತೆ ಮಾವನನ್ನು ಎಂದೂ ದೂರಿಲ್ಲ. ಅವರ ಬಗ್ಗೆ ಕೆಟ್ಟ ಮಾತನ್ನೂ ಆಡಿಲ್ಲ. ಸಾಮಾನ್ಯವಾಗಿ ಮಾವನ ಬಗ್ಗೆ ಮಾತು ಬಂದಾಗ ಅವರು ಮಾತನ್ನು ತೇಲಿಸಿ ಬಿಡುತ್ತಾರೆ. ಒಮ್ಮೆ ಅವರು ಅಂದಿದ್ದರು, "ನಿನ್ನ ಮಾವ ದೇವರಂತಹ ಮನುಷ್ಯ. ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಹುಟ್ಟಬೇಕಿತ್ತು. ಇಂದು ಒಳ್ಳೆಯತನ ಮನುಷ್ಯನ ಒಂದು ದುರ್ಬಲತೆ."
          ಮತ್ತುಮ್ಮೆ ಅವರು ಅಂದಿದ್ದರು, " ಒಳ್ಳೆಯತನ ಅನ್ನುವುದು ಹೇಡಿಗಳು ಹಾಕಿಕೊಂಡಿರುವ ಒಂದು ಮುಖವಾಡ. ಒಬ್ಬನಿಗೆ ಕೆಟ್ಟದ್ದನ್ನು ಮಾಡಲಿಲ್ಲ ಅಂದರೆ ಆತ ಒಳ್ಳೆಯವನಾದನೇನು? ಹಾಗಾದರೆ ಎಲ್ಲಾ ಹೇಡಿಗಳು ಒಳ್ಳೆಯವರು."
          "ಹಾಗಾದರೆ ನಮ್ಮಲ್ಲಿ ಒಳ್ಳೆಯತನ ಇರಬಾರದು ಅನ್ನುತ್ತೀರಾ, ಅತ್ತೆ?"
          "ಹಾಗಲ್ಲ ಬೇಬಿ. ಮನುಷ್ಯನಲ್ಲಿ ಒಳ್ಳೆಯತನ ಇರಬೇಕು. ಅದು ಮಿತಿ ಮೀರಿರಬಾರದು. ನಿನ್ನ ಮಾವನ ಒಳ್ಳೆಯತನ ಅವರ ದುರ್ಬಲತೆಯ ಲಕ್ಷಣವಾಗಿತ್ತು. ಅವರ ಒಳ್ಳೆಯತನವನ್ನು ಎಲ್ಲರೂ ಉಪಯೋಗಿಸಿಕೊಂಡರು. ಅದನ್ನು ಅರಿತುಕೊಳ್ಳಲಾರದ ಹೆಡ್ಡ - ನಿನ್ನ ಮಾವ."
          "ಈ ಮಾತನ್ನು ನಾನು ಒಪ್ಪುವದಿಲ್ಲ, ಅತ್ತೆ. ಅಜ್ಜನಾಗಲಿ, ದೊಡ್ಡನಾಗಲಿ, ಅಮ್ಮನಾಗಲಿ, ನನ್ನ ಇತರ ಮಾವಂದಿರಾಗಲಿ, ಮಾವನ ಗೆಳೆಯರಾಗಲಿ ಮಾವನ ದುರ್ಬಲತೆಯ ಪ್ರಯೋಜನ ಪಡೆದರೆಂದು ನಾನು ಒಪ್ಪುವದಿಲ್ಲ. ಮಾವನನ್ನು ನೋಡಿದ ನೆನಪು ನನಗೆ ಸರಿಯಾಗಿ ಆಗುವದಿಲ್ಲ, ನಿಜ. ಆದರೆ ಇತರರ ಒಡನಾಟ ನನಗೆ ಇನ್ನೂ ಇದೆ. ಅವರನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿದ್ದೇನೆ. ಅವರು ಯಾರೂ ಮಾವನಿಗಾಗಲಿ ಅಥವಾ ಇತರರಿಗಾಗಲಿ ಮೋಸ ಮಾಡಿಯಾರು ಅಂತ ನನಗೆ ಅನಿಸುವದಿಲ್ಲ."
          "ಅವರೆಲ್ಲ ನಿನ್ನ ಮಾವನಿಗೆ ಮೋಸ ಮಾಡಿದರು ಅಂತ ನಾನು ಹೇಳುವದಿಲ್ಲ. ಆದರೆ ಕರ್ತವ್ಯದ ಹೆಸರಿನಲ್ಲಿ ನಿನ್ನ ಮಾವನ ದುರ್ಬಲತೆಯ ಪ್ರಯೋಜನ ಪಡೆದರು."
          "ಹಾಗಿದ್ದರೆ ಮಾವನಿಗೆ ತನ್ನ ಮನೆಯವರ ಜವಾಬ್ದಾರಿ ಅಥವಾ ಕರ್ತವ್ಯ ಏನೂ ಇರಬಾರದಿತ್ತೆ?"
          "ಕರ್ತವ್ಯದ ಹೆಸರಿನಲ್ಲಿ ತನ್ನ ಬಲಿದಾನ ಒಂದು ಮೂರ್ಖತನ."
          "ಈ ಬಲಿದಾನದಿಂದ ನಮಗೆ ಆತ್ಮತೃಪ್ತಿ ಸಿಗುವುದಿಲ್ಲವೆ?"
          "ಬೇಬಿ, ನೀನು ತುಂಬಾ ಥಿಯರಿಟಿಕಲ್ಲಾಗಿ ಮಾತನಾಡುತ್ತಿ. ನೀನು ಹೇಳಿದಂತೆ ಈ ಬಲಿದಾನದಿಂದ ನಿನ್ನ ಮಾವನಿಗೆ ಆತ್ಮತೃಪ್ತಿ ಸಿಕ್ಕಿರಬಹುದು. ನೀನು ಅದನ್ನೇ ಸುಖ ಎಂದು ಕರೆಯಲೂಬಹುದು. ಈ ಅತ್ಮತೃಪ್ತಿಯನ್ನು ನಾನು ಆತ್ಮವಂಚನೆ ಎಂದು ಕರೆಯುತ್ತೇನೆ. ನಿನ್ನ ಮಾವ ಬೇರೆಯವರಿಗೆ ತೊಂದರೆ ಕೊಡಲಿಲ್ಲ, ಆದರೆ ಬೇರೆಯವರಿಗಾಗಿ ಕಷ್ಟ ಅನುಭವಿಸಿದರು. ಅವರು ಸುಖ ಪಡಲೇ ಇಲ್ಲ. ಅವರಿಗೆ ಸಂತೋಷಪಡುವ ಕಲೆ ಗೊತ್ತಿರಲಿಲ್ಲ. ಪ್ರತಿಯೊಬ್ಬನ ಹಿಂದೆಯೂ ಸ್ವಾರ್ಥವಿದೆ ಎಂದು ಅವರು ಮರೆತ್ತಿದ್ದರು. ಅವರೊಬ್ಬ ಹುಂಬ. ಎಲ್ಲರನ್ನೂ ನಂಬಿದರು. ಅದೇ ವ್ಯಕ್ತಿಗಳು ಅವರಿಗೆ ಮೋಸ ಮಾಡಿದಾಗ, ಅವರಿಗೆ ಸಿಟ್ಟು ಬರುತ್ತಿರಲಿಲ್ಲ, ಜಿಗುಪ್ಸೆಗೊಳ್ಳುತ್ತಿರಲಿಲ್ಲ. ಆದರೆ ತಾನು ನಂಬಿದ ವ್ಯಕ್ತಿ ತನಗೆ ವಿಶ್ವಾಸ ದ್ರೋಹ ಮಾಡಿದ ಅಂತ ನೊಂದು ಕೊಳ್ಳುತ್ತಿದ್ದರು, ಅಷ್ಟೆ. ಇದನ್ನು ಹುಂಬತನ ಅನ್ನದೆ ಬೇರೇನು ಹೇಳಲಿ?
          "ಬೇಬಿ, ಒಂದು ವಿಷಯ ನೆನಪಿರಿಸು, ಇತರರ ಸುಖಕ್ಕಾಗಿ ನಮ್ಮ ಸುಖವನ್ನು ಬಲಿ ಕೊಡುವುದು ಮೂರ್ಖತನ. ಈ ಆತ್ಮ ತೃಪ್ತಿ, ಆತ್ಮ ಸುಖ ಏನೇನೋ ಹೇಳುತ್ತಿದ್ದಿಯಲ್ಲಾ ಅದೆಲ್ಲಾ ನಮ್ಮ ಸೆಂಟಿಮೆಂಟ್ಸ್ ನ ಪರಮಾವಧಿ. ಈ ಸೆಂಟಿಮೆಂಟ್ಸ್ ನಿಂದಾಗಿ ನಾವು ಭಾರತೀಯರು ಹಿಂದೆ ಬಿದ್ದಿರುವುದು. ಇಂತಹ ಮೂರ್ಖ ತ್ಯಾಗಗಳಿಂದಾಗಿಯೇ ನಾವು ಅವನತಿಯನ್ನು ಹೊಂದುತ್ತಿದ್ದೇವೆ. ನನ್ನ ಪ್ರಕಾರ ಮೊದಲು ನಿನ್ನ ಸ್ವಾರ್ಥ ನೋಡು, ನೀನು ಬೆಳೆ ನಂತರ ಬೇರೆಯವರಿಗಾಗಿ ಹೋರಾಡು. ನಿನ್ನ ಅಡಿಪಾಯವೇ ಗಟ್ಟಿ ಇಲ್ಲದಿರುವಾಗ ನೀನು ಬೇರೆಯವರಿಗೆ ಹೇಗೆ ಆಸರೆ ನೀಡುತ್ತಿ?"
          ಮತ್ತೊಂದು ಸಲ ಅತ್ತೆಯೊಡನೆ ಮಾವನ ಬಗ್ಗೆ ಮಾತನಾಡುವಾಗ ಅವರು ಅಂದಿದ್ದರು, "ಬೇಬಿ, ನಿನ್ನ ಮಾವ ತುಂಬಾ ಓದಿದ್ದರು. ಅವರ ಜ್ನಾನ ನಾಯಿಯ ಮೊಲೆಯ ಹಾಲಿನಂತೆ. ನಮಗೆ ಉಪಯೋಗಕಲ್ಲ. ಅವರು ಓದಿದ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿದರು. ಯಾವ ಆದರ್ಶಗಳನ್ನು ತಾನು ಜೀವನದಲ್ಲಿ ಅನುಸರಿಸಬೇಕು, ಯಾವುದನ್ನು ಅನುಸರಿಸಬಾರದು ಎಂದು ಅವರು ತಾರ್ಕಿಕವಾಗಿ ಯೋಚಿಸಲಿಲ್ಲ. ಎಲ್ಲಾ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸಿ, ಮಾನಸಿಕವಾಗಿ ಅವರು ತುಂಬಾ ತೊಂದರೆ ಅನುಭವಿಸಿದರು.
          "ಅನೇಕ ಆದರ್ಶಗಳು ಬರೇ ಪುಸ್ತಕದಲ್ಲಿ ಇರಬೇಕು, ಅವನ್ನು ಅನುಸರಿಸಬಾರದು. ಒಬ್ಬ ಬದುಕಿರಬೇಕಾದರೆ ಆದರ್ಶಗಳಿಗೆ ಕಟ್ಟು ಬೀಳಬಾರದು. ಸಮಯ ಬಂದಾಗ, ಆದರ್ಶಗಳನ್ನು ಕಳಚಲು ಸಿದ್ಧನಿರಬೇಕು.
          "ಅನೇಕ ಆದರ್ಶಗಳಿಂದಾಗಿ ನಿನ್ನ ಮಾವ ದ್ವಂದ್ವ ಅನುಭವಿಸುತ್ತಿದ್ದರು. ಯಾವುದೆ ನಿರ್ಧಾರ ತೆಗೆದುಕೊಳ್ಳಲಾಗದೆ ಅಸಹಾಯಕರಾಗಿದ್ದರು. ಈ ದ್ವಂದ್ವ ಬರೇ ಆದರ್ಶಗಳಿಗೆ ಸೀಮಿತವಾಗಿರದೆ, ಜೀವನದಲ್ಲಿ ಯಾವುದೇ ನಿರ್ಧಾರ ತೆಗುದುಕೊಳ್ಳಲು ಬಿಡುತ್ತಿರಲಿಲ್ಲ.
          "ಅವರ ಇನ್ನೊಂದು ದುರ್ಬಲತೆ ಅಂದರೆ ಜೀವನದಲ್ಲಿ ಯಾವುದೇ ನಿರ್ದಿಷ್ಟ ಗುರಿ ಇಲ್ಲದುದು. ಹಣ ಮಾಡಬೇಕು, ಎಲ್ಲರ ಮಧ್ಯದಲ್ಲಿ ತಲೆ ಎತ್ತಿ ಜೀವನ ಸಾಗಿಸಬೇಕೆಂದು ಅವರು ಯೋಚಿಸಲೇ ಇಲ್ಲ. ಅವರು ಹಣಕ್ಕೆ ಮಹತ್ವ ಕೊಡಲೇ ಇಲ್ಲ."
          "ಅದು ಒಳ್ಳೆಯ ಗುಣ ಅಲ್ಲವೆ?" ನಾನು ಮಧ್ಯದಲ್ಲಿ ಬಾಯಿ ಹಾಕುತ್ತೆನೆ.
          ಅತ್ತೆ ವ್ಯಂಗ್ಯ ನಗು ಬೀರುತ್ತ ಹೇಳುತ್ತಾರೆ, "ಅದೊಂದು ಆದರ್ಶದ ಹುಚ್ಚು. ಹಣ ಇಲ್ಲದೆ ಬದುಕಲು ಸಾಧ್ಯವೆ? ಅವರಿಗೆ ಹಣ ಬೇಡವಾಗಿರಬಹುದು. ಆದರೆ ಅವರೊಂದಿಗೆ ಇದ್ದವರಿಗೆ? ಹಣಗಳಿಸಲು ಸಾಧ್ಯವಿಲ್ಲದವನಿಗೆ, ಹಣದ ಮೇಲೆ ಆಶೆ ಇಲ್ಲ ಅನ್ನುವ ಸೋಗು ಅಷ್ಟೆ..."
          ಅತ್ತೆಯ ಕಟು ಮಾತಿಗೆ ನಾನು ಬೆಚ್ಚುತ್ತೇನೆ. ಅವರಿಗೆ ಮಾವನ ಮೇಲೆ ಇಷ್ಟೊಂದು ದ್ವೆಷವೆ? ಅಥವಾ ಮಾವನ ಆದರ್ಶ ನಿಜವಾಗಿಯೂ ಮೊಗವಾಡವೆ? ಅಥವಾ ಅತ್ತೆ ಹೇಳುವಂತೆ ಈ ಆದರ್ಶ ಅನ್ನುವದು ಒಂದು ದುರ್ಬಲತೆಯೆ?
*******
 ರಾಜೂ ಮಾಮ ಆಗಾಗ ನಮ್ಮ ಮನೆಗೆ ಬರುತ್ತಿರುತ್ತಾರೆ. ಅವರೂ ನನ್ನ ಮಾವನೂ ಕ್ಲಾಸ್ಮೇಟ್ಸ್ ಅಂತೆ. ಹಾಗೆಯೆ ಒಳ್ಳೆಯ ಮಿತ್ರರೂ ಸಹ. ಮಾವ ಸತ್ತು ಇಷ್ಟು ವರ್ಷವಾದರೂ  ರಾಜೂ ಮಾವ ನಮ್ಮ ಸಂಬಂಧ ಕಳಚಿಲ್ಲ. ಅವರು ನಮ್ಮ ಮನೆಯ ಒಬ್ಬ ಸದಸ್ಯನೇ ಆಗಿದ್ದಾರೆ.
          ಒಮ್ಮೆ ರಾಜೂ ಮಾವನ ಮನೆಗೆ ಹೋದಾಗ, ಮಾತನಾಡುತ್ತಾ ಮಾತನಾಡುತ್ತಾ ಅವರ ಹಳೆಯ ಆಲ್ಬಂ ನೋಡುತ್ತೇನೆ. ಅದರಲ್ಲಿ ರಾಜೂ ಮಾವನೊಂದಿಗೆ ನನ್ನ ಮಾವನ ಫೋಟೋ ನೋಡುತ್ತೇನೆ. ರಾಜೂ ಮಾವ ಸಪ್ಪಗಾಗುತ್ತಾರೆ. ಮಾವನ ಬಗ್ಗೆ ತಿಳಿಯಲು ನನಗೆ ಒಂದು ಅವಕಾಶ ಸಿಗುತ್ತದೆ.
          "ಮಾವ, ಈ ಆದರ್ಶ, ಒಳ್ಳೆಯತನ ಅನ್ನುವುದು ಎಲ್ಲಾ ನಮ್ಮ ದುರ್ಬಲತೆಯೆ?"
          "ಬೇಬಿ, ನಿನಗೆ ಇದನ್ನು ನಿನ್ನ ಅತ್ತೆ ಹೇಳಿದ್ದಲ್ಲವೆ? ಯಾವ ವ್ಯಕ್ತಿಗೆ ಆದರ್ಶ ಅಂದರೇನೆಂದು ಗೊತ್ತಿಲ್ಲವೋ ಅಂತಹ ವ್ಯಕ್ತಿಗೆ ಹಣವೇ ಆದರ್ಶ, ಹೆಸರೇ ಆದರ್ಶ, ಯಶಸ್ಸೇ ಆದರ್ಶ. ಇಂತಹ ವ್ಯಕ್ತಿಗಳಿಗೆ ಒಳ್ಳೆಯತನದ ಬೆಲೆ ಏನು ಗೊತ್ತು? ತನ್ನ ಗಂಡ ಸತ್ತಾಗ ಒಂದೊ ತೊಟ್ಟೂ ಕಣ್ಣೀರನ್ನು ಸುರಿಸದ ಆಕೆ, ತನ್ನ ಗಂಡನ ಆದರ್ಶದ ಬಗೆಗೆ ಬೇರೇನು ಹೇಳಿಯಾಳು?
          "ಗಂಡ ಹೆಂಡಿರ ನಡುವೆ ಸಾಮರಸ್ಯ ತರಲು ನಾನೂ ಆಕೆಯಲ್ಲಿ ಮಾತನಾಡಿದ್ದೆ. ಆಕೆಗೆ ನಿನ್ನ ಮಾವನ ಒಳ್ಳೆಯತನ ಒಂದು ಮುಖವಾಡವಂತೆ. ದುರ್ಬಲರು, ಹೇಡಿಗಳು ತಮ್ಮ ದುರ್ಬಲತೆಯನ್ನು ಮರೆ ಮಾಡಲು ಆದರ್ಶದ ಮುಖವಾಡ ಹಾಕಿಕೊಳ್ಳುವುದಂತೆ. ಒಬ್ಬ ವ್ಯಕ್ತಿಯ ದೊಡ್ಡತನ ಅಳೆಯಲಾರದೆ, ಆತನ ಸಾವಿಗೆ ಕಾರಣವಾದವಳು ಆ ವ್ಯಕ್ತಿಯ ಆದರ್ಶದ ಬಗೆಗೆ ಬೇರೆ ಏನು ಹೇಳಿಯಾಳು? ತಾನು ತಿಳಿದದ್ದೇ ಸರಿ, ತನಗಿಂತ ಮಿಗಿಲಾದವರು ಯಾರು ಎಂಬ ಅಹಂಕಾರ ಉಳ್ಳ ಆಕೆ ಆದರ್ಶದ ಬಗೆಗೆ..."
          "ಮಾವ, ನೀವು ಅತ್ತೆಯನ್ನು ತಪ್ಪು ತಿಳಿದುಕೊಂಡಿದ್ದೀರಿ. ಆಕೆಗೆ ಅಹಂಕಾರವಿಲ್ಲ. ಮಾವನನ್ನು ಆಕೆ ಅರ್ಥ ಮಾಡಿಕೊಂಡಿರಲಿಕ್ಕಿಲ್ಲ. ಆಕೆಯ ಜೀವನದ ಆದರ್ಶ ಬೇರೆಯೇ ಇದ್ದಿರ ಬಹುದು. ನೀವೆಲ್ಲ ಮಾವನ ವ್ಯಕ್ತಿ ಪೂಜೆ ಮಾಡುತ್ತಿದ್ದೀರಿ. ಹಾಗಾಗಿ ನಿಮಗೆಲ್ಲ ಅತ್ತೆಯದೇ ತಪ್ಪಗಿ ಕಾಣುತ್ತಿರಬೇಕು."
          "ವ್ಯಕ್ತಿ ಪೂಜೆ? ಬಡವರಿಗಾಗಿ ಎಂದಾದರೂ ನಿನ್ನ ಅತ್ತೆ ಅತ್ತಿದ್ದಾಳೆಯೆ? ಬಡವರ ಹರಿದ ಅಂಗಿ ಕಂಡಾಗ ನಿನ್ನ ಅತ್ತೆಗೆ ಏನಾದರೂ ಅನಿಸೀತೆ?
          "ಯಾವುದೋ ಮುಸ್ಲಿಂ ಹಬ್ಬ ಇತ್ತು. ರಜಾ ದಿನ. ಇಂತಹ ಹಬ್ಬದ ದಿನಗಳಲ್ಲಿ ಸಾಮಾನ್ಯವಾಗಿ ಮುಸ್ಲಿಂ ಬಿಕ್ಷುಕರೂ ಹೊಸ ಅಂಗಿ ಹಾಕಿಕೊಂಡು ಬಿಕ್ಷೆ ಬೇಡುತ್ತಾರೆ. ನಾನೂ ನಿನ್ನ ಮಾವನೂ ದಾರಿಯಲ್ಲಿ ನಗು ನಗುತ್ತ ಹೋಗುತ್ತಿದ್ದೆವು. ಮಾರ್ಗದಲ್ಲಿ ಎರಡು ಎಳೆಯ ಮುಸ್ಲಿಂ ಬಾಲಕರು, ಹರಿದ ಅಂಗಿ ಹಾಕಿಕೊಂಡು ಸಂಕೋಚದಿಂದ ಕೈ ಮುಂದೆ ಮಾಡಿಕೊಂಡು ನಿಂತಿದ್ದರು. ಆ ಮಕ್ಕಳನ್ನು ಕಂಡ ಕೂಡಲೇ ನಿನ್ನ ಮಾವ ಮೌನಿಯಾದರು. ಅವರ ಹರಿದ ಅಂಗಿ ನಿನ್ನ ಮಾವನನ್ನು ನೊಯಿಸಿತು...."
          "ಒಂದು ನಿಮಿಷ, ಮಾವ ಆ ಹುಡುಗರಿಗೆ ಏನಾದರೂ ಕೊಟ್ಟರೆ? ಇಲ್ಲ ತಾನೆ? ಅವರ ಅನುಕಂಪದಿಂದ ಏನು ಪ್ರಯೋಜನ? ಅತ್ತೆ ಇದನ್ನೇ ಮೆಚ್ಚುವದಿಲ್ಲ. ಬರೇ ಕಣ್ಣಲ್ಲಿ ನೀರು ಬಂದರೆ ಆ ಬಡವರಿಗೆ ಏನು ಪ್ರಯೋಜನ ಆಯಿತು? ಆ ಮಕ್ಕಳಿಗೆ ಹಣ ಕೊಡಬಹುದಾಗಿತ್ತು. ಹಾಗೇಕೆ ಮಾಡಲಿಲ್ಲ?"
          "ಇದನ್ನು ನಾನೂ ನಿನಗೆ ಸರಿಯಾಗಿ ವಿವರಿಸಲಾರೆ. ಸಾಮಾನ್ಯವಾಗಿ ಬಿಕ್ಷುಕರಿಗೆ ನಿನ್ನ ಮಾವ ದಾನ ಕೊಡುತ್ತಿರಲಿಲ್ಲ. ಆ ಸಮಯದಲ್ಲಿ ಅವರಿಗೆ ಅಹಂ ಅಡ್ಡ ಬಂದಿರಲೂ ಬಹುದು."
          "ಹಾಗಾದರೆ ಮಾವನದು ತೋರಿಕೆಯ ಆದರ್ಶ ಎಂದಾಯಿತು."
          "ನಿಲ್ಲು, ಅವರದ್ದು ತೋರಿಕೆಯ ಆದರ್ಶವಾಗಿದ್ದರೆ, ಅವರಿಗೆ ಎಷ್ಟೊಂದು ಸುಖ ಜೀವನ ನಡೆಸಬಹುದಿತ್ತು? ತನ್ನ ಸಂಪಾದನೆಯಲ್ಲಿ ಬರೇ ತನ್ನ ಬಗ್ಗೆ, ತನ್ನ ಹೆಂಡತಿಯ ಬಗೆಗೆ ಆಲೋಚಿಸಿ ಸುಖೀ ಜೀವನ ನಡೆಸ ಬಹುದಿತ್ತು. ಆದರೆ ಹಾಗಾಗಲಿಲ್ಲ.
          "ಒಬ್ಬ ವ್ಯಕ್ತಿ ದುರ್ಬಲನಾಗಿರಬಹುದು. ಆತನಿಗೆ ಜೀವಿಸುವ ಹಕ್ಕಿಲ್ಲವೆ? ಈಗ ಒಳ್ಳೆಯ ಜನರು ಬದುಕಿ ಉಳಿಯಲು ಸಾಧ್ಯವಿಲ್ಲವೆ? ಬೇಬಿ, ನಿನ್ನ ಮಾವನಂತಹ ಜನ ಸಾಯಬೇಕೆ?
          "ನಿನ್ನ ಅತ್ತೆ ಸಹಕರಿಸುತ್ತಿದ್ದರೆ ಅವರಿನ್ನೂ ಬದುಕಿರುತ್ತಿದ್ದರು. ದುರ್ಬಲತೆ ಎಂದು ಆ ನಿನ್ನ ಅತ್ತೆ ಹೇಳುತ್ತಿದ್ದ ಅವರ ದುರ್ಬಲತೆಗಳೂ ಮಾಯವಾಗುತ್ತಿದ್ದವು. ನಿನ್ನ ಅತ್ತೆ ಅದಕ್ಕೆ ಆಸ್ಪದ ಕೊಡಲಿಲ್ಲ. ತನ್ನ ಘನತೆ, ತನ್ನ ಮಿತ್ರರ ಗುಂಪೆಂದು ಆಕೆ ಅವರನ್ನು ಕಡೆಗಾಣಿಸಿದಳು. ಹೆಂಡತಿಯಿಂದ ಕೀಳಾಗಿ ಕಾಣಲ್ಪಟ್ಟ ಗಂಡಸು ಎಂದೂ ಜೀವಿಸಿರಲಾರ. ನಿನ್ನ ಮಾವನ ಆದರ್ಶದ ಕನಸ್ಸು ನಿನ್ನ ಅತ್ತೆಯ ಸಂಗದಲ್ಲಿ ಒಡೆದು ಚೂರಾಯಿತು. ಅವರಿಗೆ ಬದುಕು ಅಸಹನೀಯವಾಯಿತು. ನಿನ್ನ ಅತ್ತೆಯ ಒಂದೇ ಒಂದು ಪ್ರೀತಿಯ ಮಾತು, ಪ್ರೀತಿಯ ನಗು ನಿನ್ನ ಮಾವನಿಗೆ ಜೀವಿಸಲು ಸಾಕಾಗಿತ್ತು. ಆದರೆ ಅದು ಅವರಿಗೆ ಸಿಗಲಿಲ್ಲ."
          ರಾಜು ಮಾವ ಕಣ್ಣೀರು ಒರೆಸಿಕೊಳ್ಳುತ್ತಾರೆ. ಸುಮಾರು ನಲ್ವತ್ತೈದು ವರ್ಷದ ವ್ಯಕ್ತಿ, ನನ್ನಂತಹ ಎಳೆಯ ಪ್ರಾಯದ ಯುವಕನ ಎದುರಿಗೆ ಕಣ್ಣೀರು ಒರೆಸುವಾಗ ನನಗೆ ಕಸಿವಿಸಿ ಆಗುತ್ತದೆ. ಅವರಿಬ್ಬರ ಗೆಳೆತನದ ಬೆಸುಗೆ ನೆನೆದಾಗ ಮೂಕನಾಗುತ್ತೇನೆ.
         
       "ನಿನ್ನ ಮಾವ ಸಾಯುವಾಗ ಬರೆದಿಟ್ಟಿದ್ದರು: ಯಾವ ವ್ಯಕ್ತಿ ತನ್ನ ದುರ್ಬಲತೆಗಳಿಂದ ಬದುಕಲು ಅನರ್ಹನೋ, ಯಾವ ವ್ಯಕ್ತಿಯಿಂದ ಸಮಾಜಕ್ಕೆ ಸ್ವಲ್ಪವೂ ಲಾಭವಿಲ್ಲವೋ ಅಂತಹ ವ್ಯಕ್ತಿ ಸಾಯಬೇಕು. ನನ್ನ ಸಾವಿಗೆ ವ್ಯಕ್ತಿಗತವಾಗಿ ಯಾರೂ ಕಾರಣರಲ್ಲ.
          "ಎಷ್ಟೊಂದು ಲಕ್ಷಾಂತರ ಮಂದಿ ಬದುಕಲು ಅನರ್ಹರಾಗಿದ್ದಾರೆ, ಆದರೂ ಅವರು ಬದುಕಿಯೇ ಇದ್ದಾರೆ. ಅವರಿಗೆಲ್ಲಾ ನಾಳೆ ಅನ್ನುವ ಆಶೆ ಇದೆ. ನಿನ್ನ ಮಾವನಿಗೆ ಆ ಆಶೆ ಇರಲಿಲ್ಲ. ಮದುವೆಯ ನಂತರ ಅವರು ಸಂಪೂರ್ಣ ನಿರಾಶಾವಾದಿ ಆದರು. ಪ್ರಾಯಶಃ ಆದರ್ಶವಾದಿಗೂ ನಿರಾಶಾವಾದಿಗೂ ಹತ್ತಿರದ ಸಂಬಂಧ ಇರಬೇಕು. ಯಾವ ವ್ಯಕ್ತಿ, ಎಂತಹ ವ್ಯಕ್ತಿಗಳು ಬದುಕಿರಬೇಕೋ ಅಂತಹ ವ್ಯಕ್ತಿಗಳು ನಮ್ಮ ಹುಚ್ಚು ಕನಸ್ಸುಗಳ ನಡುವೆ ಜೀವನದ ಅರ್ಥ ಕಂಡುಕೊಳ್ಳಲು ಅಸಮರ್ಥರಾಗುತ್ತಾರೆ. ಇದು ನಮ್ಮ ದುರ್ದೈವ.
          "ನಿನ್ನ ಮಾವನ ಬದುಕಿಗೆ ಅರ್ಥವಿತ್ತು. ಆದರೆ ಅದನ್ನು ಅವರು ಕಂಡುಕೊಳ್ಳಲಿಲ್ಲ. ನಿನ್ನ ಅತ್ತೆಗೆ ಅದು ಅರ್ಥ ಆಗಲಿಲ್ಲ. ಅವರ ಬದುಕು ಅನೇಕರಿಗೆ ಆದರ್ಶಪ್ರಾಯವಾಗುತ್ತಿತ್ತು. ಆದರೆ ಅವರು ಬದುಕಲಿಲ್ಲ."

***
          ಮಾವ ಸತ್ತು ಇಂದಿಗೆ ಸರಿಯಾಗಿ ಹದಿನೈದು ವರ್ಷಗಳಾಗುತ್ತವೆ. ಅಮ್ಮ, ದೊಡ್ಡ ಮೌನವಾಗಿದ್ದಾರೆ. ಅವರಿಗೆ ಇಂದು ಮಾವನ ನಡೆ - ನುಡಿಗಳ ನೆನಪು ಹೆಚ್ಚಾಗಿರಬಹುದು. ಅವರ ತೈಲಚಿತ್ರದ ಎದುರು ದೀಪ ಹಚ್ಚಿ ಊದಿನಕಡ್ಡಿ ಹಚ್ಚಿಟ್ಟಿದ್ದಾರೆ.
          ಸಾಯಂಕಾಲ ಅತ್ತೆಯ ಮನೆಗೆ ಹೋಗುತ್ತೇನೆ. ಅವರು ದಿನದಂತೆ ಸಹಜವಾಗಿಯೇ ಇದ್ದಾರೆ. ನಾನು ಬೇಕೆಂದೇ ಕೇಳುತ್ತೇನೆ, "ಇವತ್ತು ನಿಮಗೆ ಏನೂ ಅನಿಸುವದಿಲ್ಲವೆ? ಈ ದಿನ ಏನಾದರೂ ವಿಶೇಷ...."
          "ಹೋ.., ಇವತ್ತು ಸ್ವಲ್ಪ ಚಳಿ ಹೆಚ್ಚು...."
          ನನಗೆ ತಡೆದುಕೊಳ್ಳಲಾಗದೆ ಹೇಳಿಯೇ ಬಿಡುತ್ತೇನೆ, " ಅತ್ತೇ...., ದೊಡ್ಡ ಹೇಳುವಂತೆ ನಾನೂ ಹೇಳುತ್ತೇನೆ - ಮಾವನನ್ನು ಕೊಂದವರು ನೀವು, ನೀವು ಅವರನ್ನು ಕೊಂದವರು...ಈ ಹೊತ್ತು..ಈ ಹೊತ್ತು...ಮಾವ ಸತ್ತ ದಿನ...ನಿಮಗೆ ಅದೂ ನೆನಪಿಲ್ಲವೆ? ಬೇಕೆಂದೇ ನೀವು ಅವರನ್ನು ಮರೆತ್ತಿದ್ದೀರಿ....,ಯಾಕೆಂದರೆ ಮಾವ ನಿಮ್ಮನ್ನು ಕಾರಿನಲ್ಲಿ ತಿರುಗಿಸಲಿಲ್ಲ...ವಿಮಾನದಲ್ಲಿ ಹಾರಿಸಲಿಲ್ಲ...ಅವರಲ್ಲಿ ಹಣ ಇರಲಿಲ್ಲ....ಅವರ ಸಂಪತ್ತು ನಿಮಗೆ ತಿಳಿಯಲಾಗಲಿಲ್ಲ. ನಿಮಗೆ ಘನತೆ ಬೇಕಿತ್ತು....ನಿಮಗೆ ಹಣ ಬೇಕಿತ್ತು."
          ರಾಜೂ ಮಾವನ ಮಾತುಗಳು ಕಿವಿಯಲ್ಲಿ ಇನ್ನೂ ಗುಂಯಿಗುಡುತ್ತಿದ್ದವು.
          "ಅತ್ತೆ, ಅವರಿಗೆ ಪೂರ್ಣ ಮನುಷ್ಯನಾಗಬೇಕಿತ್ತು, ನೀವು ಬಿಡಲಿಲ್ಲ. ಅವರಿಗೆ ಪ್ರೀತಿಯ ಅಗತ್ಯವಿತ್ತು, ನೀವು ಕೊಡಲಿಲ್ಲ. ನಿಮ್ಮ ಒಂದೆ ಒಂದು ಪ್ರೀತಿಯ ಮಾತು ಅವರನ್ನು ಜೀವಂತ ಇರಿಸುತ್ತಿತ್ತು, ಆದರೆ ನೀವು ಆಡಲಿಲ್ಲ. ನಿಮಗೆ ಅವರ ಆದರ್ಶ ಮುಖವಾಡವಾಗಿ ಕಂಡಿತು... ಹೋ, ಎಂತಹ ಟ್ರಝೆಡಿ.....!
          "ಅತ್ತೆ, ನಾನು ನಿಮಗೆ ಇಷ್ಟರವರೆಗೆ ಹೇಳಿಲ್ಲ.....ಹಾಗೆ ಅನಿಸಲೂ ಇಲ್ಲ, ಆದರೆ ಇವತ್ತು ಅನಿಸು ತ್ತದೆ, ಈಗ ಹೇಳುತ್ತೇನೆ....ಮಾವನನ್ನು ಕೊಂದವರು ನೀವೆ...." ನಾನು ಬಿಕ್ಕಿ ಬಿಕ್ಕಿ ಅಳುತ್ತೆನೆ.
          ಅತ್ತೆ ಗಂಭೀರವಾಗುತ್ತಾರೆ. ನನ್ನ ದುಃಖ ಸ್ಥಿಮಿತಕ್ಕೆ ಬಂದ ಮೇಲೆ ಆಕೆ ಮೆಲ್ಲನೆ ಹೇಳುತ್ತಾರೆ, "ಬೇಬಿ, ಕೊನೆಗೂ ನೀನು ಸಹ ಎಲ್ಲರಂತೆ ಅದನ್ನೇ ಹೇಳಿದೆ. ನನ್ನ ಮನಸ್ಸನ್ನು ಯಾರೂ ಅರಿತುಕೊಂಡಿರಲಿಲ್ಲ, ಈಗ ನೀನು ಕೂಡಾ....
          "ನಿನ್ನ ಮಾವನಿಗೆ ಆಸರೆ ಬೇಕಿತ್ತು. ನಾನು ಬೇಕೆಂದೇ ಕೊಡಲಿಲ್ಲ. ಅವರಿಗೆ ನನ್ನ ಇಲ್ಲವೆ ಬೇರೆಯವರ ಆಸರೆ ಎಷ್ಟು ಸಮಯ ಸಿಕ್ಕೀತು? ಅದೂ ನಾನು ಹೆಣ್ಣು. ನನಗೆ ಅವರು ತಮ್ಮ ಕಾಲ ಮೇಲೇನೆ ನಿಲ್ಲಬೇಕಿತ್ತು. ಅವರಿಗೆ ನನ್ನ ಪ್ರೀತಿ ಬೇಕಿತ್ತು, ನನ್ನ ನಗು ಬೇಕಿತ್ತು. ನಾನು ಕೊಡಲಿಲ್ಲ ನಿಜ. ನನ್ನ ಮೇಲಿನ ದ್ವೇಷದಿಂದಾದರೂ ಅವರು ನನಗೆ ಗಂಡಸಾಗ ಬೇಕಿತ್ತು, ಮಗುವಲ್ಲ, ಹೆಣ್ಣಿಗನಲ್ಲ.
          "ನಿನ್ನ ಮಾವನಿಗೆ ಜೀವನದಲ್ಲಿ ಏನಾದರೂ ಗುರಿ ಇತ್ತೆ? ತಾನು ಹೀಗೀಗೆ ಆಗಬೇಕೆಂದು ಅವರು ಎಂದಾದರೂ ಯೋಚಿಸಿದ್ದರೆ? ತಾನು ಕೆಲಸ ಮಾಡುವ ಕಂಪೆನಿಯ ಉದ್ಧಾರದ ಬಗ್ಗೆ ಯೋಚಿಸುತ್ತಿದ್ದ ಅವರು ಎಂದಾದರೂ ತನ್ನ ಉದ್ದಾರದ ಬಗೆಗೆ ಯೋಚಿಸಿದ್ದರೆ?  ಜೀವನದಲ್ಲಿ ಅವರಿಗೆ ಛಲ ಇತ್ತೆ? ಹಟ ಇತ್ತೆ? ಯಾವುದೇ ಛಲ, ಖಚಿತ ಗುರಿ ಇಲ್ಲದೆ, ಜೀವನದಲ್ಲಿ ಏನನ್ನೂ ಸಾಧಿಸಬಲ್ಲೆ ಎನ್ನುವ ಆತ್ಮ ವಿಶ್ವಾಸ ಇಲ್ಲದೆ, ನಿಷ್ಕ್ರಿಯ ಆಗುತ್ತಿರುವ ವ್ಯಕ್ತಿ ಗಂಡಸೆ? ಅಂತಹ ವ್ಯಕ್ತಿಗಳನ್ನು ಜೀವಂತ ಇದ್ದಾರೆ ಅನ್ನಬಹುದೆ, ಬೇಬಿ?
          "ನಾನು ಮದುವೆ ಆದಾಗಲೇ ನಿನ್ನ ಮಾವ ಸತ್ತಿದ್ದರು. ನಾನು ಓರ್ವ ನಿರ್ಜೀವ ಮನುಷ್ಯನನ್ನು ಮದುವೆಯಾದೆ. ನಾನು ಮದುವೆಯಾದಾಗಲೇ ಅವರು ಜೀವನದ ಅರ್ಥ ಕಳೆದುಕೊಂಡಿದ್ದರು. ಯಾವುದೇ ಗುರಿ, ಉದ್ದೇಶ ಇಲ್ಲದೆ ಬಾಳುವ ವ್ಯಕ್ತಿಯ ಜೀವನದಲ್ಲಿ ಅರ್ಥ ಇರುವುದಾದರೂ ಹೇಗೆ?
          ’ಆ ಫೀಸಿನಲ್ಲಿ ತನ್ನ ಅಧಿಕಾರಿಗಳನ್ನು ಸಂತೋಷ ಪಡಿಸಬೇಕೆಂದು ಗೊತ್ತಿದ್ದ ಅವರಿಗೆ ತನ್ನ ಹೆಂಡತಿಯನ್ನು ಸಂತೋಷಗೊಳಿಸಬೇಕೆಂದು ಗೊತ್ತಿರಲಿಲ್ಲವೆ? ಅವರು ನನ್ನೊಡನೆ ಎಷ್ಟು ಬೆರೆಯುತ್ತಿದ್ದರು? ಎಷ್ಟು ಮಾತನಾಡುತ್ತಿದ್ದರು? ಬೌದ್ದಿಕವಾಗಿ ಅವರು ಎಷ್ಟೇ ಮೇಲೇರಿರಲಿ, ನನ್ನೊಂದಿಗೆ ಬೌದ್ಡಿಕವಾಗಿ ಎಷ್ಟೊಂದು ಕೂಡುತ್ತಿದ್ದರು? ನನ್ನೊಂದಿಗೆ ಯಾವುದೆ ವಿಷಯದ ಬಗ್ಗೆ ಚರ್ಚಿಸುತ್ತಿದ್ದರೆ? ಹೆಂಡತಿಗೆ - ಹೆಂಗಸಿಗೆ ತನ್ನದೇ ಆದ ವ್ಯಕ್ತಿತ್ವ ಇದೆ ಎಂದು  ಅವರು ಮರೆತ್ತಿದ್ದರು. ಅವರು ಕೆಲಸ ಕೆಲಸ ಎಂದು ನಸುಕಿನಿಂದ ರಾತ್ರಿಯವರೆಗೆ ದುಡಿಯುತ್ತಿದ್ದರು. ರಜಾ ದಿನಗಳಲ್ಲೂ ಆಫೀಸಿನ ಕೆಲಸ ಮಾಡುತ್ತಿದ್ದರು. ತನ್ನ ಆಫೀಸಿನ ಕೆಲಸದ ವಿಷಯದಲ್ಲಿ ಇಷ್ಟೊಂದು ನಿಗಾ ವಹಿಸುತ್ತಿದ್ದ ವ್ಯಕ್ತಿ, ತನ್ನ ಮನೆಯ ಕೆಲಸದ ಬಗೆಗೆ, ಹೆಂಡತಿಯ ಬಗೆಗೆ ಸ್ವಲ್ಪವಾದರೂ ಕಾಳಜಿ ವಹಿಸುತ್ತಿದ್ದರೆ? ರಾತ್ರಿ ಮಲಗುವಾಗ ಮಗ್ಗುಲಲ್ಲಿ ಅವರಿಗೆ ಹೆಂಡತಿ ಬೇಕಿತ್ತು. ಅವರಿಗೆ ಬೇಕಿದ್ದುದು ನನ್ನ ಮೈ ಮಾತ್ರ. ಅಂತಹ ವ್ಯಕ್ತಿಗೆ ಮೈ ಕೊಡಲು ನನ್ನಿಂದ ಅಗಲಿಲ್ಲ.
          "ಹೆಂಡತಿ ಗಂಡನಿಂದ ಏನನ್ನು ಅಪೇಕ್ಷಿಸುತ್ತಾಳೆ? ಆತನ ಹಣವನ್ನೆ? ಆತನ ಅಂತಸ್ತನ್ನೆ? ಆತನ ವ್ಯಕ್ತಿತ್ವವನ್ನೆ? ಇಲ್ಲ, ಬೇಬಿ, ಹೆಣ್ಣು ಗಂಡನನ್ನು ಹಣಕ್ಕಾಗಿ, ಅಂತಸ್ತಿಗಾಗಿ ಖಂಡಿತಾ ಪ್ರೀತಿಸಲಾರಳು. ಹೆಣ್ಣು ಗಂಡಿನಲ್ಲಿ ಗಂಡಸುತನವನ್ನು ನಿರೀಕ್ಷಿಸುತಾಳೆ. ಆತ ತನ್ನ ಆತ್ಮ ಗೌರವವನ್ನು ಕಾಪಾಡಿಕೊಳ್ಳುವವನಾಗಿರಬೇಕು.
          "ನೀನು ಕಾರ್ನಾಡರ ಹಯವದನ ಓದಿದ್ದೀಯಲ್ಲ? ಅದರಲ್ಲಿನ ಪದ್ಮಿನಿಯ ದ್ವಂದ್ವವನ್ನು ಅರ್ಥ ಮಾಡಿಕೊಂಡಿದ್ದೀಯ? ಆಕೆ ದೇವದತ್ತನ ತಲೆ ಇರುವ ಕಪಿಲನ ಮೈಯನ್ನು ಆರಿಸುತ್ತಾಳೆ. ಯಾಕೆ ಗೊತ್ತೆ? ಆಕೆಗೆ ಪೂರ್ಣ ಮನುಷ್ಯ ಬೇಕಾಗಿದ್ದ. ನನಗೆ ದೇವದತ್ತನ ತಲೆ ಸಿಕ್ಕಿತ್ತು. ಆದರೆ ಕಪಿಲನಂತಹ ವ್ಯಕ್ತಿತ್ವ ಉಳ್ಳ ಗಂಡಸು ಸಿಗಲಿಲ್ಲ. ನನ್ನ ಜೀವನದಲ್ಲಿ ಕಪಿಲನ ಪ್ರವೇಶ ಆಗಲೇ ಇಲ್ಲ, ನಾನು ಅದಕ್ಕೆ ಆಸ್ಪದವನ್ನೂ ಕೊಡಲಿಲ್ಲ. ಆದರೆ ನಿನ್ನ ಮಾವನಿಗೆ ಆ ಸಂಶಯ ಇತ್ತು. ಇತರರನ್ನು ಸುಲಭವಾಗಿ ನಂಬುತ್ತಿದ್ದ ನಿನ್ನ ಮಾವ ನನ್ನನ್ನು ನಂಬಲೇ ಇಲ್ಲ.
          "ನಿನ್ನ ಮಾವನಿಗೆ ತನ್ನ ಸ್ವಾರ್ಥದ ಬಗೆಗೆ, ತನ್ನ ಹೆಂಡತಿಯ ಬಗೆಗೆ ಸ್ವಲ್ಪ ಕಾಳಜಿ ಇರುತ್ತಿದ್ದರೆ ನಾವು ಚೆನ್ನಾ
ಗಿಯೇ ಇರುತಿದ್ದೆವೋ ಏನೋ.  ಆದರೆ ಅವರಿಗೆ ದೇವತಾ ಪುರುಷನಾಗಬೇಕಿತ್ತು. ತನ್ನ ದುರ್ಬಲತೆಗಳಿಗೆಲ್ಲಾ ಆದರ್ಶದ ಮುಖವಾಡ ಹಾಕಲು ಯತ್ನಿಸಿದರು. ಅವರು  ದೈಹಿಕವಾಗಿ ಸಾಯುವ  ಮೊದಲೇ ಮಾನಸಿಕವಾಗಿ ಸತ್ತಿದ್ದರು, ಹಾಗೆಯೇ ನನ್ನನ್ನು ಸಹ ಕೊಂದರು."
          ಎಂದೂ ನನ್ನ ಎದುರು ಅಳದ ಅತ್ತೆ ಬಿಕ್ಕಿ ಬಿಕ್ಕಿ ಅಳುತ್ತಾ ಒಳ ಹೋಗುತ್ತಾರೆ. ನಾನು ಸ್ವಲ್ಪ ಸಮಯ ಅಲ್ಲೇ ಕುಳಿತಿದ್ದು, ಅವರಿಗೆ ಹೇಳದೆಯೇ ಹೊರ ನಡೆಯುತ್ತೇನೆ.




No comments:

Post a Comment